ಬಿನ್ನಮಂಗಲ
ಕರ್ನಾಟಕ ರಾಜ್ಯದ ಬೆಂಗಳೂರು ಜಿಲ್ಲೆಯ ನೆಲಮಂಗಲ ತಾಲ್ಲೂಕಿನಲ್ಲಿ ನೆಲಮಂಗಲದಿಂದ ಸುಮಾರು 3 ಕಿಮೀ ಪೂರ್ವಕ್ಕಿರುವ ಒಂದು ಸಣ್ಣ ಗ್ರ್ರಾಮ. ಇಲ್ಲಿಯ ಮುಕ್ತೇಶ್ವರ ದೇವಾಲಯ ಚೋಳರ ಕಾಲದ ಸುಂದರ ಶಿಲ್ಪ. ಒಂದನೆಯ ಕುಲೋತ್ತುಂಗ ಚೋಳ ಈ ದೇವಾಲಯಕ್ಕೆ ದತ್ತಿಯನ್ನು ಕೊಟ್ಟಂತೆ 1110ರ ಇಲ್ಲಿಯ ಒಂದು ತಮಿಳು ಶಾಸನ ತಿಳಿಸುತ್ತದೆ. ಆದುದರಿಂದ ದೇವಸ್ಥಾನ ಆ ಕಾಲಕ್ಕಿಂತಲೂ ಮೊದಲೇ ನಿರ್ಮಿತವಾಗಿತ್ತೆಂದು ತಿಳಿಯಬಹುದು. ರಾಜೇಂದ್ರ ಚೋಳನ 1038ರ ಶಾಸನವೊಂದು ಬಿನ್ನಮಂಗಲವನ್ನು ಹೆಸರಿಸಿರುವುದರಿಂದ ಆ ಕಾಲದಲ್ಲಿ ಈ ದೇಗುಲವನ್ನು ಕಟ್ಟಿಸಿರಬಹುದೆಂದು ಊಹಿಸಲಾಗಿದೆ. ದೇವಾಲಯ ದ್ರಾವಿಡ ಶೈಲಿಯಲ್ಲಿ ನಿರ್ಮಿತವಾಗಿದ್ದು ಗರ್ಭಗೃಹ ಮತ್ತು ಸುಕನಾಸಿಗಳಲ್ಲಿ ಪ್ರತಿಯೊಂದರಲ್ಲೂ ನಾಲ್ಕು ಕಂಬಗಳಿವೆ. ನವರಂಗದ ನಾಲ್ಕು ಕಂಬಗಳು ಸುಂದರವಾದ ಕೆತ್ತನೆಗಳಿಂದ ಅಲಂಕೃತವಾಗಿವೆ. ಎಲ್ಲ ಕಡೆಗಳಲ್ಲಿಯೂ ಮನೋಹರವಾಗಿ ಬಿಡಿಸಿರುವ ಮೂರ್ತಿಗಳಿಂದ ಕೂಡಿದ ತಳಪಾಯದ ಕಲ್ಲುಗಳ ಮೇಲಿರುವ ಈ ಕಂಬಗಳ ಮೇಲಿನ ಭಾಗದಲ್ಲಿ ಅನೇಕ ರೀತಿಯ  ಆಲಂಕಾರಿಕ ರಚನೆಗಳನ್ನು ಅಳವಡಿಸಲಾಗಿದೆ. ಭುವನೇಶ್ವರಿಯಲ್ಲಿ ಅಷ್ಟದಿಕ್ಪಾಲಕರ ಅಂದವಾದ ಮೂರ್ತಿಗಳ ಮೇಳವಿದೆ. ನವರಂಗದ ದ್ವಾರ ಅತ್ಯಂತ ಸುಂದರವಾದ ಶಿಲ್ಪ ವಿನ್ಯಾಸದಿಂದ ಕೂಡಿದೆ. ಬಾಗಿಲುವಾಡದ ಮೇಲ್ಭಾಗದಲ್ಲಿ ಮಕರ ಹಾಗೂ ಸಿಂಹಗಳಿಂದ ಕೂಡಿದ ಗಜಲಕ್ಷ್ಮಿ ಶಿಲ್ಪವನ್ನು ಅತ್ಯಂತ ನೈಪುಣ್ಯದಿಂದ ಬಿಡಿಸಲಾಗಿದೆ. ಮಕರಗಳು ಸಿಂಹಗಳ ಕಾಲುಗಳನ್ನು ನುಂಗುತ್ತಿರುವಂತೆ ಕಡೆಯಲಾಗಿದೆ. ಬಾಗಿಲುವಾಡದ ಪಕ್ಕ ನಿಲವುಗಳ ಮುಂಭಾಗದಲ್ಲಿ ಕುಬ್ಜ ಯಕ್ಷರ ಸಾಲುಗಳನ್ನು ಬಿಡಿಸಲಾಗಿದೆ. ಹೊರಗಿನ ಗೋಡೆ ಅಥವಾ ಬಾಹ್ಯ ಭಿತ್ತಿಗಳನ್ನು ಚೆನ್ನಾಗಿ ಹಸನು ಮಾಡಿದ ಚಪ್ಪಡಿಗಳಿಂದ ಕಟ್ಟಲಾಗಿದೆ. ಈ ಗೋಡೆಗಳ ಕೆಳಭಾಗದಲ್ಲಿ ದೇವಾಲಯದ ಸುತ್ತಲೂ ಸಿಂಹಗಳ ಸಾಲುಗಳಿವೆ. ಅಲಂಕೃತವಾದ ತಳಪಾಯದ ಕಲ್ಲುಗಳ ಮೇಲೆ ಸಣ್ಣ ಹಾಗೂ ದೊಡ್ಡದಾದ ಮೂರ್ತಿಗಳನ್ನು ರಚಿಸಲಾಗಿದೆ. ಕೆಲವು ವಿಗ್ರಹಗಳು ಮೇಲಿನ ಕೋಷ್ಠಗಳಲ್ಲಿವೆ. ತಾಂಡವೇಶ್ವರ, ಗಣಪತಿ, ಶಿವ, ವಿಷ್ಣು, ಬ್ರಹ್ಮ, ಮಹಿಷನ ತಲೆ ಮೇಲೆ ಕುಳಿತಿರುವ ಶಚಿ ದೇವಿ, ಜಟಾಧಾರಿಯಾದ ಒಬ್ಬ ಸಂನ್ಯಾಸಿ, ಭೈರವ, ವೇಣುಗೋಪಾಲ ಹಾಗೂ ಸೂರ್ಯ, ಚಂದ್ರ ಮುಂತಾದವು ಮುಖ್ಯ ಶಿಲ್ಪಗಳು. ಸೂರ್ಯಚಂದ್ರರ ಮೂರ್ತಿಗಳು ದ್ವಾರದ ಇಕ್ಕೆಲಗಳಲ್ಲಿವೆ. ಸ್ತ್ರೀ ಮೂರ್ತಿಗಳಲ್ಲಿ ದೊಡ್ಡವನ್ನು ಅತ್ಯಂತ ಮನೋಜ್ಞವಾಗಿ ಕೆತ್ತಲಾಗಿದೆ. ಈ ದೇವಾಲಯದ ಶಿಲ್ಪಗಳು ಸರಳ ಹಾಗೂ ಸಹಜವಾಗಿದ್ದು ಅನಂತರ ಬಂದ ಅಲಂಕಾರಾತಿರೇಕದಿಂದ ಕೂಡಿದ ಶಿಲ್ಪಗಳಿಂದ ತೀರ ಭಿನ್ನವಾಗಿವೆ. ಮುಕ್ತೇಶ್ವರ ದೇವಾಲಯದ ಶಿಲ್ಪಕಲಾ ಕೌಶಲ್ಯ ಉತ್ಕøಷ್ಟವಾದುದು. 					

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ